ವೆರ್ತೈನರ್, ಮ್ಯಾಕ್ಸ್
	1880-1934. ಜರ್ಮನ್ ಮನೋವಿಜ್ಞಾನಿ. ಸಮಷ್ಟಿ ಮನಶ್ಶಾಸ್ತ್ರದ ಆದ್ಯಪ್ರವರ್ತಕ. 1880ರಂದು ಪ್ರಾಗ್‍ನಲ್ಲಿ ಜನಿಸಿದ. ಅಲ್ಲಿಯೇ ವಿದ್ಯಾಭ್ಯಾಸವನ್ನು ಮುಗಿಸಿ ಮಾರ್ಷಿಯಸ್ ಬಳಿ ಮನಶ್ಶಾಸ್ತ್ರದ ಶಿಕ್ಷಣವನ್ನು ಪಡೆದ. ಅನಂತರ ಬರ್ಲಿನ್‍ನಗರಕ್ಕೆ ತೆರಳಿ ಅಲ್ಲಿ ಸ್ಟೂಂಫ್ ಬಳಿಯೂ ವೋರ್ಸ್‍ಬರ್ಗ್‍ನಲ್ಲಿ ಕ್ಯುಲ್ಪೆ ಬಳಿಯೂ ಶಿಷ್ಯವೃತ್ತಿಯನ್ನು ಮಾಡಿದ. 1904ರಲ್ಲಿ ವೂರ್ಸ್‍ಬರ್ಗ್ ವಿಶ್ವವಿದ್ಯಾಲಯ ಇವನಿಗೆ ಪಿಎಚ್.ಡಿ. ಪದವಿ ನೀಡಿತು. ಅನಂತರ ಈತ ಬರ್ಲಿನ್‍ಗೆ ಹಿಂದಿರುಗಿ 1910ರಲ್ಲಿ ಫ್ರಾಂಕ್‍ಫರ್ಟ್‍ಗೆ ಬಂದ. ಆ ವೇಳೆಗೆ ಸ್ಟೂಂಫ್‍ನ ಶಿಷ್ಯರೇ ಆಗಿದ್ದ ಕರ್ಟ್‍ಕಾಫ್ಕ ಮತ್ತು ವೂಲ್ಫ್‍ಗಾಂಗ್ ಕೊಯ್ಲರ್ ಇಬ್ಬರೂ ಫ್ರಾಂಕ್‍ಫರ್ಟ್‍ನಲ್ಲಿಯೇ ಇದ್ದರು. ಈತ ಆರಂಭಿಸಿದ ದೃಷ್ಟಚಲನೆಯ (ಸೀನ್ ಮೂವ್‍ಮೆಂಟ್) ಸಂಶೋಧನೆಯಲ್ಲಿ ಅವರಿಬ್ಬರೂ ಭಾಗವಹಿಸಿದ್ದರು. ಇಂದ್ರಿಯ ಸಂವೇದನೆಗಳನ್ನು ವಿಶ್ಲೇಷಣೆ ಮಾಡಿ ಪ್ರತ್ಯಕ್ಷವನ್ನು ನಿರ್ದೇಶನ ಮಾಡುವ ಸಂಪ್ರದಾಯವನ್ನು ಪ್ರತಿಭಟಿಸಿ ಸಮಷ್ಟಿಯ ಸಿದ್ಧಾಂತವನ್ನು ಈ ಮೂರು ಜನ ಸೇರಿ ನಿರೂಪಿಸಿದರು. 1912ರಲ್ಲಿ ಈತ ಪ್ರಕಟಿಸಿದ ಪ್ರಬಂಧ ಈ ಸಿದ್ಧಾಂತವನ್ನು ಮೊಟ್ಟ ಮೊದಲಿಗೆ ಪ್ರತಿಪಾದಿಸಿತು. ಕೊಯ್ಲರ್ ಮತ್ತು ಕಾಫ್ಕರ ನೆರವಿನಿಂದ ಸಮಷ್ಟಿಮನಶ್ಶಾಸ್ತ್ರವನ್ನು (ಗೆಸ್ಟಾಲ್ಟ್ ಸೈಕಾಲಾಜಿ) ಪ್ರಚಲಿತ ದೃಷ್ಟಿಯಾಗಿ ರೂಪುಗೊಳಿಸಿತು. ಅನಂತರ ಈತ ಬರ್ಲಿನ್ ನಗರಕ್ಕೆ ಹಿಂದಿರುಗಿ ಅಲ್ಲಿ ಕೆಲಸಮಾಡುತ್ತಿದ್ದ(1922-29). ಫ್ರಾಂಕ್‍ಫರ್ಟ್‍ನಲ್ಲಿ ಷೂಮನ್ ವಿಶ್ರಾಂತನಾದ ಮೇಲೆ ಅವನ ಸ್ಥಾನಕ್ಕೆ ಇವನನ್ನು ಆಹ್ವಾನಿಸಲಾಯಿತು. ಇಲ್ಲಿ ಕೆಲಸಮಾಡುತ್ತಿದ ಈತ 1934ರಲ್ಲಿ ನಿಧನನಾದ. ಈತ ಪ್ರವರ್ತಿಸಿದ ಸಮಷ್ಟಿ ಮನಶ್ಶಾಸ್ತ್ರ ಸಿದ್ಧಾಂತ ಬರ್ಲಿನ್‍ಶಾಖೆ ಎಂದೇ ಪ್ರಸಿದ್ಧವಾಗಿದೆ.		
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ